ನನ್ನ ಶಾಲೆ ನನ್ನ ತೀರ್ಥಕ್ಷೇತ್ರ ಕಾರ್ಯಕ್ರಮ  – ಬೆಂಗಳೂರು ಉತ್ತರ ಜಿಲ್ಲೆ

ದಿನಾಂಕ : 29-05-2022 ರ ಭಾನುವಾರದಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯಂದ ಶ್ರೀ ಮಲ್ಲಿಕಾರ್ಜುನಸ್ವಾಮಿ ಪ್ರೌಢಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಣ ವೃಂದ, ಕಛೇರಿ ಸಿಬ್ಬಂದಿ, ಶಾಲೆಯ ಹಳೆಯ ಮತ್ತು ಹಾಲಿ ವಿದ್ಯಾರ್ಥಿಗಳ ಸಹಯೋಗದೊಂದಿಗೆ ನನ್ನ ಶಾಲೆ ನನ್ನ ತೀರ್ಥಕ್ಷೇತ್ರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವು ಉತ್ತರ ವಲಯ-4 ರ ಅಧ್ಯಕ್ಷರಾದ ಶ್ರೀ ಶಿವಕುಮಾರಸ್ವಾಮಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆಯ ಮುಖ್ಯಶಿಕ್ಷಕರು ಹಾಗೂ ಕ.ರಾ.ಮಾ.ಶಿ.ಸಂಘದ ಬೆಂಗಳೂರು ಉತ್ತರಜಿಲ್ಲೆಯ ಅಧ್ಯಕ್ಷರು ಆದ ಶ್ರೀ ಗಂಗಪ್ಪನವರು ವೇದಿಕೆಯ ಮೇಲಿರುವ ಗಣ್ಯರು ಹಾಗೂ ಕಾರ್ಯಕ್ರಮದಲ್ಲಿ ನೆರೆದಿರುವ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ವೇದಿಕೆಯ ಮೇಲೆ ಆಸೀನರಾಗಿದ್ದ ಅತಿಥಿಗಳು ಹಾಗು ಗಣ್ಯರು ದೀಪವನ್ನು ಬೆಳಗುವ ಮೂಲಕ ಕಾರ್ಯಕ್ರಮದ ಉದ್ಭಾಟನೆಯನ್ನು ನೆರವೇರಿಸಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಖಜಾಂಚಿಗಳಾದ ಶ್ರೀ ಜೆ.ಎಂ. ಜೋಶಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಂಘ ನಡೆದು ಬಂದ ದಾರಿ, ಸಂಘದ ಕಾರ್ಯಕ್ರಮ ಮತ್ತು ಅದರ ಉದ್ದೇಶ ಇವೆಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಹತ್ವದ ಕಾರ್ಯಕ್ರಮ ನನ್ನ ಶಾಲೆ ನನ್ನ ತೀರ್ಥಕ್ಷೇತ್ರದ ಮಹತ್ವವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಚಿದಾನಂದ ಪಾಟೀಲರು ತಿಳಿಸುತ್ತಾ ರಾಮಾಯಣದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಶಕ್ತಿಯನ್ನು ನೆನಪಿಸಿ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಶ್ರೀಕಾಂತ್ ಸೀತಾರಾಮ್‌ರವರ ನಿಸ್ವಾರ್ಥ ಸೇವೆಯನ್ನು, ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳ ಶ್ರಮದಾನವನ್ನು ಅಭಿನಂದಿಸಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾವಲ್‌ಭೈರಸಂದ್ರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ನಾರಾಯಣ್‌ರವರು ನನ್ನ ಶಾಲೆ ನನ್ನ ತೀರ್ಥಕ್ಷೇತ್ರ ಶೀರ್ಷಿಕೆಯನ್ನು ಶ್ಲಾಘಿಸಿ ಶಾಲೆಯನ್ನು ತೀರ್ಥಕ್ಷೇತ್ರ ಮಾಡುವಂತಹ ಕಾರ್ಯವನ್ನು ಶಾಲೆಯ ಆಡಳಿತ ಮಂಡಳಿ, ಶಿಕ್ಷಕವೃಂದ, ಹಳೆಯ ವಿದ್ಯಾರ್ಥಿಗಳು, ಸಮುದಾಯದೊಂದಿಗೆ ಆಗುತ್ತಿರುವುದನ್ನು ಕಂಡು ಅಭಿನಂದಿಸಿದರು. ನವ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕೊಡುಗೆ ಅಮೂಲ್ಯವಾದುದು ಎಂದು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ವಲಯ-೩ರ ಕಾರ್ಯದರ್ಶಿ ಶ್ರೀ ಎಂ.ವಿ. ಗಂಗಾಧರರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ನನ್ನ ಶಾಲೆ ನನ್ನ ತೀರ್ಥಕ್ಷೇತ್ರ ಕಾರ್ಯಕ್ರಮವು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ನಡೆಯಲು ನೆರವನ್ನು ದಾನದ ರೂಪದಲ್ಲಿ ನೀಡಿದ ದಾನಿಗಳಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ಅಭಿನಂದಿಸಲಾಯಿತು. ದಾನಿಗಳನ್ನು ಮುಖ್ಯ ಶಿಕ್ಷಕರಾದ ಶ್ರೀ ಗಂಗಪ್ಪನವರು ಪರಿಚಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಯುತ ಶ್ರೀಕಾಂತ್ ಸೀತಾರಾಮ್‌ರವರು ವಹಿಸಿದ್ದರು. ಬೆಂಗಳೂರು ವಿಭಾಗ ಪ್ರಮುಖರು ಮತ್ತು ಉತ್ತರ ವಲಯ-3ರ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ.ಜಿ ಕೂಡಗಿರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ವಂದಿಸಿದರು. ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್ಟರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ : ಶ್ರೀ ಎಂ.ವಿ ಗಂಗಾಧರ, ಕಾರ್ಯದರ್ಶಿ,
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ವಲಯ-3

Highslide for Wordpress Plugin