ವಿವಿಧೆಡೆಗಳಲ್ಲಿ ಗುರುವಂದನಾ ಕಾರ್ಯಕ್ರಮ

ಬೆಂಗಳೂರು ದಕ್ಷಿಣ ಜಿಲ್ಲೆ

ದಿನಾಂಕ 4-7-2023 ಮಂಗಳವಾರದಂದು ಕ.ರಾ.ಮಾ.ಶಿ. ಸಂಘದ ಕಾರ್ಯಾಲಯ ಯಾದವಸ್ಮೃತಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ದಕ್ಷಿಣ ವಿಭಾಗದ ವತಿಯಿಂದ ಗುರುವಂದನಾ ಕಾರ್ಯಕ್ರಮವು ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಲ್ಪಟ್ಟಿತು. ಕು|| ವೇದಶ್ರೀ ರವರ ಆಚಾರ್ಯ ಶಂಕರ ವಿರಚಿತ ಗುರ್ವಷ್ಟಕದ ಸುಶ್ರಾವ್ಯವಾದ ಗಾಯನದೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು. ಮುಖ್ಯ ವಕ್ತಾರರಾಗಿ ವಿದ್ವಾನ್ ವೇಂಕಟರಾಮ ಶಾಸ್ತ್ರಿಗಳು ಉಪಸ್ಥಿತರಿದ್ದರು. ಅವರು ಉಪನ್ಯಾಸ ನೀಡುತ್ತ ಭಾರತೀಯ ಪರಂಪರೆಯಲ್ಲಿ ಆಷಾಢ ಶುಕ್ಲ ಪೂರ್ಣಿಮೆಯು ಗುರುಪೂರ್ಣಿಮೆ ಅಥವಾ ವ್ಯಾಸಪೂರ್ಣಿಮೆ ಎಂದು ಪ್ರಸಿದ್ಧವಾಗಿದೆ. ಈ ದಿನ ಭಗವಾನ್ ವೇದವ್ಯಾಸರು ಅವತರಿಸಿದ ಪವಿತ್ರದಿನ. ಹಾಗಾಗಿ ಯತಿಗಳು ಸಾವಿರಾರು ವರ್ಷಗಳಿಂದ ಈ ದಿನದಂದು ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಿ ವ್ಯಾಸರ ಪೂಜೆ ಮಾಡಿ ಒಂದೆಡೆ ನೆಲೆನಿಂತು ಲೋಕಕಲ್ಯಾಣಕ್ಕಾಗಿ ತಪಸ್ಸನ್ನು ಅನುಷ್ಠಾನ ಮಾಡುತ್ತಾರೆ. ವ್ಯಾಸರು ಪ್ರಪಂಚವನ್ನು ಜ್ಞಾನದ ಬೆಳಕಿನಿಂದ ಬೆಳಗಿದ ಮಹಾಪುರುಷರು. ಲೋಕಕ್ಕೆ ಭಗವಾನ್ ವ್ಯಾಸರ ಕೊಡುಗೆ ಅಪಾರ. ವಿಷ್ಣುವಿನ ಅವತಾರಿಗಳಾದ ವ್ಯಾಸರು ಅಧ್ಯಯನ ಸೌಕರ್ಯಕ್ಕಾಗಿ ವೇದಗಳ ವಿಭಾಗ ಮಾಡಿದರು. ಬ್ರಹ್ಮಸೂತ್ರಗಳನ್ನು ರಚಿಸಿದರು. 18 ಪುರಾಣಗಳನ್ನು, ಉಪಪುರಾಣಗಳನ್ನು ಮತ್ತು ಮಹಾಭಾರತವನ್ನು ರಚಿಸಿದರು. ಜ್ಞಾನ ನೀಡಿದ ಗುರುಗಳನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯ. ಗುರುಗಳ ಮಹಿಮೆ ಅಪಾರವಾದದ್ದು. ಶ್ರೀರಾಮನಿಗೆ ವಸಿಷ್ಠರು ಗುರುಗಳು. ಶ್ರೀ ಕೃಷ್ಣನಿಗೆ ಸಾಂದೀಪಿನಿ ಮಹರ್ಷಿಗಳು ಗುರುಗಳು. ಅರ್ಜುನನಿಗೆ ದ್ರೋಣಾಚಾರ್ಯರು ಗುರುಗಳು. ಚಂದ್ರಗುಪ್ತನಿಗೆ ಚಾಣಕ್ಯ ಗುರುಗಳು. ಶಿವಾಜಿಗೆ ಸಮರ್ಥ ರಾಮದಾಸರು ಗುರುಗಳು. ಹಕ್ಕ, ಬುಕ್ಕರಿಗೆ ವಿದ್ಯಾರಣ್ಯರು ಗುರುಗಳು. ಸ್ವಾಮಿ ವಿವೇಕಾನಂದರಿಗೆ ಶ್ರೀ ರಾಮಕೃಷ್ಣ ಪರಮಹಂಸರು ಗುರುಗಳು. ಅಬ್ದುಲ್ ಕಲಾಂರವರಿಗೆ ವಿಕ್ರಂ ಸಾರಾಬಾಯಿ ಗುರುಗಳು. ಹೀಗೆ ಗುರು ಪರಂಪರೆ ಅದ್ಭುತವಾಗಿ ಇದೆ ಎಂದು ತಿಳಿಸಿದರು.

ತಾಯಿ-ತಂದೆ ಮೊದಲ ಗುರುಗಳು. ವಿದ್ಯೆಯನ್ನು ಹೇಳಿ ಕೊಟ್ಟ ಗುರುಗಳನ್ನಂತೂ ಮರೆಯಲು ಸಾಧ್ಯವಿಲ್ಲ. ಏಕಾಕ್ಷರಂ ಕಲಿಸಿದಾತಂ ಗುರು ಎಂಬಂತೆ ನಮ್ಮ ಜೀವನದಲ್ಲಿ ತಿದ್ದಿ, ತೀಡಿ ಬುದ್ಧಿ ಹೇಳಿ ಉತ್ತಮ ಸಂಸ್ಕಾರ ನೀಡಿ, ಮಾರ್ಗದರ್ಶನ ಮಾಡಿದವರೆಲ್ಲರೂ ಗುರುಗಳೇ ಎಂದು ಹೇಳಿ ಗುರುವಿನ ಗರಿಮೆ, ಗುರುವಿನ ಮಹತ್ತ್ವ, ಗುರುವಿನ ಕರುಣೆ, ಗುರುವಿನ ತ್ಯಾಗಗಳ ಗುಣಗಾನ ಮಾಡಿದರು. ಗುರುಗಳು ಮೇಣದ ಬತ್ತಿಯಂತೆ. ತಾವು ಉರಿದು ಪ್ರಪಂಚಕ್ಕೆ ಜ್ಞಾನದ ಬೆಳಕನ್ನು ದಯಪಾಲಿಸಿದ್ದಾರೆ. ಲೋಕ ಕಲ್ಯಾಣಕ್ಕಾಗಿ ದಧೀಚಿ ಮಹರ್ಷಿಯ ತ್ಯಾಗ, ಸ್ವಾಮಿ ವಿವೇಕಾನಂದರ ಮೇಲೆ ರಾಮಕೃಷ್ಣ ಪರಮಹಂಸರ ಕರುಣೆ, ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಶಿವಾಜಿ ಮಹಾರಾಜನಿಗೆ ಸಮರ್ಥ ರಾಮದಾಸರ ಮಾರ್ಗದರ್ಶನಗಳನ್ನು ದೃಷ್ಟಾಂತ ಪೂರ್ವವಾಗಿ ಸ್ಮರಿಸಿದರು. ಜಗದ್ಗುರು ಶ್ರೀ ಶಂಕರಾಚಾರ್ಯರು ಆ ಕಾಲದಲ್ಲಿ ಅಖಂಡ ಭಾರತವನ್ನು ಸಂಚರಿಸಿ ಸನಾತನ ಹಿಂದೂ ಧರ್ಮವನ್ನು ಭದ್ರಗೊಳಿಸಿದ ಸಾಹಸ ಕಾರ್ಯವನ್ನು ಮರೆಯಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು. ಕಾರ್ಯಕ್ರಮದ ನಿರೂಪಣೆ ಮತ್ತು ಪ್ರಾಸ್ತಾವಿಕವನ್ನು ಜಿಲ್ಲಾ ಕಾರ್ಯದರ್ಶಿಗಳಾದ ಡಾ|| ವೇಂಕಟರಮಣ ದೇವರು ಭಟ್ಟ ರವರು ಮಾಡಿದರು. ಬೆಂಗಳೂರು ದಕ್ಷಿಣ ವಿಭಾಗ ಪ್ರಮುಖರಾದ ಶ್ರೀ ಸುರೇಂದ್ರ ಬಿ.ಎ ರವರು ಸ್ವಾಗತಿಸಿದರು. ಜಿಲ್ಲಾಧ್ಯಕ್ಷರಾದ ವಿದ್ವಾನ್ ನಾರಾಯಣ ಭಟ್ಟರವರು ವಂದನಾರ್ಪಣೆ ಮಾಡಿದರು. ಶ್ರೀ ಹರಿನಾರಾಯಣ ಮಯ್ಯರವರು ಶಾಂತಿ ಮಂತ್ರ ಪಠಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ್ ರವರು, ರಾಜ್ಯ ಕೋಶಾಧ್ಯಕ್ಷರಾದ ಶ್ರೀ ಜೆ.ಎಂ. ಜೋಶಿರವರು, ಜಿಲ್ಲಾ ಖಜಾಂಚಿಗಳಾದ ಶ್ರೀ ಚನ್ನಕೃಷ್ಣಪ್ಪರವರು, ಪೂರ್ವ ತಾಲ್ಲೂಕಿನ ಅಧ್ಯಕ್ಷರಾದ ಶ್ರೀ ಮುನಿರಾಜು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ವರದಿ – ಡಾ|| ವೆಂಕಟರಮಣ ದೇವರ ಭಟ್ಟ, ಕಾರ್ಯದರ್ಶಿಗಳು, ಕ.ರಾ.ಮಾ.ಶಿ ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆ

ಕಲಬುರ್ಗಿ

ದೇಶವು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸನಾತನ ದೇಶ. ಇಲ್ಲಿ ಗುರು ಶಿಷ್ಯರ ಸಂಬಂಧದಲ್ಲಿ ಒಂದು ವಿಶಿಷ್ಟತೆ ಹೊಂದಿದ್ದು, ಗುರುವಿಗೆ ಉನ್ನತ ಸ್ಥಾನ ನೀಡಿದ ಏಕೈಕ ದೇಶವಾಗಿದೆ. ಆದ್ದರಿಂದ ಭಾರತ ದೇಶವನ್ನು ಇತರ ದೇಶಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ.ಲಕ್ಷ್ಮಣಜಿ ಹೇಳಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕ ನಗರದ ಶ್ರೀ ಶರಣ ಬಸವೇಶ್ವರ ವಸತಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಮ್ಮ ದೇಶ ಸ್ವತಂತ್ರ್ಯ ಪಡೆದು ನೂರು ವರ್ಷಗಳ ಸಂದರ್ಭದಲ್ಲಿ ನಮ್ಮ ದೇಶ ಹೇಗಿರಬೇಕು ಎಂಬ ಕನಸನ್ನು ನಾವು ಹೊಂದಿರಬೇಕು. ಆ ಕನಸನ್ನು ನನಸು ಮಾಡಲು ನಮ್ಮ ಕೊಡುಗೆ ಯಾವ ರೀತಿಯಾಗಿರಬೇಕು ಎಂಬ ಗುರಿಯನ್ನು ನಾವೆಲ್ಲರೂ ಹೊಂದಿರಲೇಬೇಕಿದೆ ಎಂದು ನುಡಿದರು. ವಿದ್ಯಾರ್ಥಿಗಳೊಂದಿಗೆ ಗುರು ಶಿಷ್ಯರ ಸಂಬಂಧದ ಕುರಿತು ಸಂವಾದ ಮಾಡಿದರು

ಎಸ್‌ಬಿಆರ್ ವಸತಿ ಪಿಯು ಕಾಲೇಜಿನ ಡಾ|| ಶ್ರೀಶೈಲ್ ಹೊಗಾಡೆ, ವಿಶ್ವನಾಥ ಪಾಟೀಲ ಯಲಗೋಡ, ಡಾ|| ಚಂದ್ರಕಾಂತ ಪಾಟೀಲ, ಮಾಧ್ಯಮಿಕ ಶಿಕ್ಷಕ ಸಂಘದ ವಿಭಾಗ ಪ್ರಮುಖ ಮಹೇಶ ಬಸರಕೋಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಪಾಟೀಲ, ಅನಿಲ ಕುಮಾರ ಬಿರಾದಾರ, ದೇವಪ್ಪ ಕನ್ನೊಳ್ಳಿ, ಚಂದ್ರಶೇಖರ ಪಾಟೀಲ ಇತರರು ಕಾರ್ಯಕ್ರಮದಲ್ಲಿದ್ದರು.

Highslide for Wordpress Plugin